ಪರ್ವತ -
ಭೂಮೇಲ್ಮೈಯ ಒಂದು ಲಕ್ಷಣ- ಬುಡದಿಂದ ಕೊಡಿಯ ವರೆಗೆ ನೆಟ್ಟನೆ ಚಾಚಿಕೊಂಡಿರುತ್ತದೆ, ಸಾಧಾರಣವಾಗಿ ಕಡಿದಾದ ಇಳಿಚಾರುಗಳನ್ನು ಒಳಗೊಂಡಿರುತ್ತದೆ ಮತ್ತು ಸಾಪೇಕ್ಷವಾಗಿ ಅಲ್ಪ ಶೃಂಗವಿಸ್ತಾರವುಳ್ಳದ್ದಾಗಿರುತ್ತದೆ (ಮೌಂಟನ್). ಪ್ರಕೃತಿಯಲ್ಲಿ ಸುತ್ತ ಮುತ್ತ ದೃಷ್ಟಿ ಹರಿಸಿದರೆ ಸಾಮಾನ್ಯವಾಗಿ ಎತ್ತರ ಮತ್ತು ತಗ್ಗು ಪ್ರದೇಶಗಳನ್ನು ಕಾಣುವೆವು. ಇವು ಪ್ರಕೃತಿಯ ಹಲವಾರು ಕ್ರಿಯೆಗಳ ಫಲ. ಪರ್ವತ ಎಂಬ ಪದ ಏಕಾಕಿ ಚಾಚುವಿಗೂ ಒಂದು ರೀತಿಯಲ್ಲಿ ಅನ್ವಯವಾಗುತ್ತದೆ. ಕಾರಣ. ಮಟ್ಟವಾದ ಬಯಲು ಪ್ರದೇಶದಲ್ಲಿ ವಾಸಿಸುವರೆಗೆ ಎತ್ತರವಾದ ಗುಡ್ಡವೇ ಪರ್ವತ ಅಥವಾ ಬೆಟ್ಟವಾದರೆ, ಪಶ್ಚಿಮಘಟ್ಟಗಳು, ಆರಾವಳಿ, ವಿಂಧ್ಯ ಮತ್ತು ಹಿಮಾಲಯ ವಲಯಗಳಲ್ಲಿ ವಾಸಿಸುವವರಿಗೆ ಸಾಮಾನ್ಯವಾಗಿ ಅತಿ ಎತ್ತರವಾದ ಹಾಗೂ ಹಳ್ಳತಿಟ್ಟಿನಿಂದ ಕೂಡಿರುವ ಭಾಗ ಮಾತ್ರ ಪರ್ವತವೆಂದು ಅರ್ಥವಾಗುತ್ತದೆ. ಎಂದೇ ದಿಬ್ಬ, ಮೊಟ್ಟೆ, ಗುಡ್ಡ, ಬೆಟ್ಟ, ಗಿರಿ, ಪರ್ವತ ಪದಗಳು ಅನುಕ್ರಮವಾಗಿ ಅಧಿಕಾಧಿಕ ಎತ್ತರದ ಭೂಪ್ರದೇಶಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುವುದಾಗಿದೆ. ಇವೆಲ್ಲವೂ ಆಸುಪಾಸಿನ ಬಯಲಹರವಿಗಿಂತ ಪ್ರತ್ಯೇಕವಾಗಿ ಎದ್ದು ಕಾಣುವಂತಿದ್ದರೂ ಸಾಮಾನ್ಯವಾಗಿ ಗುಡ್ಡಕ್ಕಿಂತ ಎತ್ತರವಾಗಿದ್ದು ಸುತ್ತಮುತ್ತಲ ಪ್ರದೇಶಕ್ಕಿಂತ 600 ಮೀಟರ್ ಅಥವಾ ಹೆಚ್ಚು ಎತ್ತರವಾಗಿರುವ ಭೂಭಾಗಗಳನ್ನು ಮಾತ್ರ ಪರ್ವತಗಳೆಂದು ಕರೆಯುವುದು ವಾಡಿಕೆ. ಇಂಥ ಪ್ರದೇಶಗಳಲ್ಲಿ ದೀರ್ಘವಾದ ಇಳಿಜಾರುಗಳು, ಆಳವಾದ ಕಣಿವೆ ಕಂದರಗಳು ಮತ್ತು ಇಕ್ಕಟ್ಟಾದ ದಿಬ್ಬಗಳಿದ್ದು ಎತ್ತರಕ್ಕೆ ಅನುಗುಣವಾಗಿ ಸಸ್ಯ ವರ್ಗದಲ್ಲಿಯೂ ಹವೆಯಲ್ಲಿಯೂ ವ್ಯತ್ಯಾಸಗಳನ್ನು ಕಾಣಬಹುದು.

ಪರ್ವತಶ್ರೇಣಿ (ಕಾರ್ಡಿಲ್ಲೆರ) ಎಂಬ ಪದವನ್ನು 1916ರಲ್ಲಿ ಸ್ವಿಟ್‍ಜóರ್‍ರ್ಲೆಂಡಿನ ಇ. ಆಗ್ರ್ಯಾಂಡ್ ಎಂಬ ಭೂವಿಜ್ಞಾನಿ ಟಂಕಿಸಿದೆ ವಿ.ಪಿ. ರೆನೆಗಾರ್ಟನ್ 1926ರಲ್ಲಿ ರಷ್ಯದ ಭೂವಿಜ್ಞಾನ ಪರಿಶೀಲನೆಯಲ್ಲಿ ಈ ಪದವನ್ನು ಬಳಸಿದ. ಉದಾಹರಣೆಗೆ ರಾಕಿ, ಆಂಡೀಸ್ ಕಾರ್ಡಿನಲ್ಲೆರ ಪ್ರತಿಯೊಂದು ಪರ್ವತಶ್ರೇಣಿಯಲ್ಲಿಯೂ ಅನೇಕ ಪರ್ವತ ಸಮೂಹಗಳಿರುತ್ತವೆ. ಒಂದು ಭೂಖಂಡದ ಅತಿ ಪ್ರಮುಖ ಭಾಗದಲ್ಲಿ ಇಂಥ ಹಲವಾರು ಪರ್ವತಗಳು ಸಮೂಹಗಳಿದ್ದರೆ ಆ ಖಂಡಕ್ಕೆ ಪರ್ವತಶ್ರೇಣಿ ವಲಯವೆಂದು ಹೆಸರು. ಉದಾಹರಣೆಗೆ ಉತ್ತರ ಅಮೆರಿಕದ ಅಲಾಸ್ಕದಿಂದ ಮಧ್ಯ ಅಮೆರಿಕದವರೆಗಿನ ಎಲ್ಲ ಪರ್ವತಗಳ ಸಾಲು, ಕಣಿವೆ, ಕಂದರ, ಅಂತರ, ಪರ್ವತ ಪ್ರದೇಶದ ಕಣಿವೆಗಳಿಗೂ ಸೇರಿ ರಾಕೀ ಪರ್ವತಶ್ರೇಣಿ ವಲಯವಾಗಿದೆ. ಹಾಗೆಯೇ ದಕ್ಷಿಣ ಅಮೆರಿಕದ ಆಂಡೀಸ್ ಪರ್ವತಶ್ರೇಣಿ ವಲಯ ಕೂಡ.

ಪರ್ವತಶ್ರೇಣಿಗಳ ವಯಸ್ಸು ಬೇರೆ ಬೇರೆ. ಕಾರಣ ಇವು ಗತಕಾಲದಲ್ಲಿ ಹಲವಾರು ಹಂತಗಳಲ್ಲಿ ರೂಪುಗೊಂಡವು. ಎಂದೇ ಇವುಗಳ ಎತ್ತರ ಕೂಡ ಬೇರೆ ಬೇರೆ. ಎಲ್ಲ ಪರ್ವತ ಶ್ರೇಣಿಗಳೂ ಭೂಕವಚದಲ್ಲಿ ತೀವ್ರರೀತಿಯ ಮಾರ್ಪಾಟುಗಳಿಂದ ಒತ್ತೊಡಕ್ಕೊಳಗಾಗಿ ಭಾರಿ ಮಡಿಕೆಗಳು ಸ್ತರಭಂಗಗಳೂ ತಲೆದೋರಿವೆ. ಪರ್ವತಗಳು ಪ್ರಕೃತಿಯಲ್ಲಿ ಅನಿರೀಕ್ಷಿತವಾಗಿ ಕೆಲವೇ ಕ್ಷಣಗಳಲ್ಲಿ ಉದ್ಭವಿಸಿದವಲ್ಲ. ಬದಲು, ಹಲವು ದಶಲಕ್ಷವರ್ಷಗಳಲ್ಲಿ ರೂಪುಗೊಂಡವು. ಒಂಟಿಪರ್ವತಗಳನ್ನು ಸಾಧಾರಣವಾಗಿ ಶಿಖರಗಳೆಂದು ಕರೆಯುತ್ತೇವೆ. ಆದರೆ ಇಂಥವು ವಿರಳ.

ಪರ್ವತಗಳನ್ನು ಸಾಮಾನ್ಯವಾಗಿ ಆ ಪ್ರದೇಶದ ನೆಲಮಟ್ಟದಿಂದ ಮೇಲಿರುವ ಎತ್ತರದಿಂದ ಅಥವಾ ಸಮುದ್ರಮಟ್ಟದಿಂದ ಮೇಲಿರುವ ಎತ್ತರದಿಂದ ಅಳೆಯುತ್ತೇವೆ. ಹಾಗೆಯೇ ಪರ್ವತವನ್ನು ಏರದಯೇ ವಾಯುಭಾರಮಾಪಕದ ಮತ್ತು ಉನ್ನತಮಾಪಿಯ (ಆಲ್ಟಿಮೀಟರ್) ನೆರವಿನಿಂದ ನಿಖರವಾಗಿ ಪರ್ವತದ ಎತ್ತರವನ್ನು ಅಳೆಯಬಹುದು. ಆದರೂ ಹೀಗೆ ಮಾಡಿದ ಆಳತೆ ವಾಯುಗುಣ ಮತ್ತಿತರ ಕಾರಣಗಳಿಂದ ವ್ಯತ್ಯಾಸವಾಗಬಹುದು. ಉದಾಹರಣೆಗೆ ಮೌಂಟ್ ಎವರೆಸ್ಟ್ ಶಿಖರದ ಎತ್ತರ 29,002 ಅಡಿಗಳು (8787.9 ಮೀ) ಎಂಬುದಾಗಿ ವಿವಿಧ ರೀತಿಯ ಸಮೀಕ್ಷೆಗಳಿಂದ ತಿಳಿದುಬಂದಿದೆ. ಆದರೆ 29,028 ಅಡಿಗಳು (8848 ಮೀ) ಸಾಮಾನ್ಯವಾಗಿ ಒಪ್ಪಿರುವ ಎತ್ತರ. ಭೂಭಾಗಗಳಲ್ಲದೆ ಸಾಗರದಡಿಯಲ್ಲೂ ಪರ್ವತಸಾಲುಗಳಿವೆ. ಅವುಗಳಲ್ಲಿ ಹಲವು ತಳದಿಂದ ಸುಮಾರು 9.144 ಮೀ ಎತ್ತರವಿದ್ದು ನೀರಿನ ಮಟ್ಟದಿಂದ ಮೇಲೆದ್ದು ದ್ವೀಪಗಳಾಗಿವೆ. ಉದಾಹರಣೆಗೆ ಹವಾಯಿಯ ಜ್ವಾಲಾಮುಖಿ ಶಿಖರಗಳು, ಮಧ್ಯ ಅಟ್ಲಾಂಟಿಕ್ ಸಾಗರ ದಿಬ್ಬಗಳು, ಇತ್ಯಾದಿ.

ಪರ್ವತಗಳ ವರ್ಗೀಕರಣ : ಪರ್ವತಗಳನ್ನು ಅವುಗಳ ಉದ್ಭವ ರೀತಿಯನ್ನು ಆಧರಿಸಿ ಮೂರು ಗುಂಪುಗಳಾಗಿ ವಿಂಗಡಿಸಬಹುದು : ಪರ್ವತಗಳು (ಟೆಕ್ಟೋನಿಕ್ ಮೌಂಟನ್ಸ್), ಭೂಸವೆತದಿಂದಾದ ಪರ್ವತಗಳು. ಜ್ವಾಲಮುಖಿಜ ಪರ್ವತಗಳು.
ಭೂಮಿಯ ಮೇಲ್ಮೈಯಲ್ಲಿ ಕೆಲವು ಭಾಗಗಳು ಸುತ್ತಮುತ್ತಲಿನ ಸಮತಲ ಪ್ರದೇಶಕ್ಕಿಂತ ಹೆಚ್ಚು ಎತ್ತರವಾಗಿ, ಅವುಗಳ ಮಧ್ಯೆ ಹೆಚ್ಚು ಏರುತಗ್ಗುಗಳಿದ್ದರೆ ಅಂಥವು ಮೊದಲ ಗುಂಪಿಗೆ ಸೇರುತ್ತವೆ. ಈ ರೀತಿಯ ಪರ್ವತಗಳು ಶಿಲಾಮಡಿಕೆಗಳಿರುವ ಅಸ್ಥಿರ ಭೂಪ್ರದೇಶಗಳಿಗೆ ಸೀಮಿತವಾಗಿರುತ್ತವೆ. ಇವು ಹಲವಾರು ಸಹಸ್ರ ಕಿಲೋಮೀಟರುಗಳಷ್ಟು ಉದ್ದವಾಗಿ ಕಿರಿದಾದ ಭೂವಲಯದಲ್ಲಿ ಹಬ್ಬಿರುತ್ತವೆ. ಉದಾಹರಣೆ ಜಿಯೊಸಿಂಕ್ಲೈನುಗಳು. ಆದರೆ. ಈ ರೀತಿಯ ಪರ್ವತಗಳು ಜಟಿಲ ಪರ್ವತ ರಚನಾಕಾರ್ಯಗಳಿಂದಾದವು. ಈ ಕಾರ್ಯಚರಣೆಯ ತೀವ್ರತೆಯನ್ನು ಅನುಸರಿಸಿ ಬೇರೆ ಬೇರೆ ಹೆಸರುಗಳಿಂದ ಗುರುತಿಸುತ್ತೇವೆ. ಉದಾಹರಣೆಗೆ ಹಿಮಾಲಯ, ಕಾಕಸ್ ಆಲ್ಪ್ಸ್, ಪಿರನ್ನೀಸ್ ಮತ್ತು ರಾಕಿ ಪರ್ವತಸ್ತೋಮಗಳು.

ಎರಡನೆಯ ಗುಂಪಿಗೆ ಸೇರಿದ ಪರ್ವತಗಳು ಭೂಭಾಗದಲ್ಲಿ ಪ್ರಸ್ಥಭೂಮಿಯಂಥವು. ಇವು ಸಮತಲ ಭೂರಚನೆಗಳನ್ನು ಒಳಗೊಂಡಿರುತ್ತವೆ. ನದಿಗಳು ಕೊರೆದ ಕಣಿವೆಗಳೂ ಇವನ್ನು ಬೇರ್ಪಡಿಸುತ್ತವೆ. ಉದಾಹರಣೆಗೆ ಉತ್ತರ ಅಮೆರಿಕದ ಕಾಲರ್ಯಾಡೋ ನದಿ ಬಯಲಿನಲ್ಲಿರುವ ಪರ್ವತಗಳು.

ಮೂರನೆಯ ಗುಂಪಿಗೆ ಸೇರಿದ ಪರ್ವತಳು ಜ್ವಾಲಾಮುಖೀ ಕಾರ್ಯಾಚರಣೆಯಲ್ಲಿ ಹೊರಬಂದ ಶಿಲಾರಸ ಮುಂತಾದವುಗಳಿಂದ ಏರ್ಪಟ್ಟವು. ಇವು ಸಾಮಾನ್ಯವಾಗಿ ಪರ್ವತರಚನಾಕಾರ್ಯ ನಡೆವ ಪ್ರದೇಶದ ಮೇಲೆ ರೂಪುಗಂಡಂಥವು ಸಾಗರ ಮಧ್ಯದಲ್ಲಿಯ ಜ್ವಾಲಾಮುಖಿ ದಿಬ್ಬಗಳೂ ಈ ಗುಂಪಿಗೆ ಸೇರಿದವು. ಉದಾಹರಣೆಗೆ ಕಿಲಿಮಾಂಜರೊ.

ಪರ್ವತ ರಚನಾಕಾರ್ಯವನ್ನು ಭೂಚರಿತ್ರೆಯಲ್ಲಿ ಹಲವಾರು ಘಟ್ಟಗಳಾಗಿ ವಿಂಗಡಿಸಲಾಗಿದೆ. ನಿಜ. ಆದರೆ ಅವು ನಿರ್ದಿಷ್ಟ ಕಾಲಗಳಿಗೇ ಸೀಮಿತಗೊಂಡಿವೆಯೆಂದು ಹೇಳಲು ಸಾಧ್ಯವಾಗಿಲ್ಲ. ಏಕೆಂದರೆ ಅನಾದಿ ಕಾಲದಿಂದ ತೊಡಗಿ ವರ್ತಮಾನ ಕಾಲದ ತನಕವೂ ಪರ್ವತ ಕಾರ್ಯಚರಣೆ ನಡೆಯುತ್ತಲೇ ಬಂದಿದೆ : ಮುಂದೆಯೂ ನಡೆಯಲಿದೆ. ಪರ್ವತಗಳು ಹುಟ್ಟಿವೆ. ಅಳಿದಿವೆ. ಆದರೆ ಅವುಗಳ ಅವಧಿ ಹಲವು ದಶಲಕ್ಷ ವರ್ಷಗಳೇ ಇರಬಹುದು. 

ಚಿತ್ರ-4

ಸಾಮಾನ್ಯವಾಗಿ ಪರ್ವತ ಅಥವಾ ಬೆಟ್ಟಗಳು ಬೆಳೆಯುತ್ತವೆಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿರುವುದು. ಆದರೆ ವಾಸ್ತವವಾಗಿ ಗುಡ್ಡ, ಬೆಟ್ಟ ಅಥವಾ ಪರ್ವತಗಳು ಸುತ್ತಮುತ್ತಲ ಮಣ್ಣು ಸದಾ ಸವೆಯುವುದರಿಂದ ಅವು ಎತ್ತರಗೊಳ್ಳುವಂತೆ ಭಾಸವಾಗುವುದಾಗಿದೆ. 

ಚಿತ್ರ-6

ಪರ್ವತ ಕಾರ್ಯಚರಣೆ ಮೂರು ಭಿನ್ನ ರೀತಿಗಳಲ್ಲಿ ಮುಂದುವರಿಯುತ್ತದೆ : ಅಲ್ಲಲ್ಲಿ ಜ್ವಾಲಾಮುಖಿ ಶಿಖರಗಳು ಭೂಮಿಯ ಹೊರಚಿಪ್ಪಿನಿಂದ ಮೇಲೇರುವುದು ಒಂದು ರೀತಿ. ಎತ್ತರವಾದ ಪ್ರಸ್ಥಭೂಮಿಗಳ ಶಿಥಿಲೀಕರಣ ಮತ್ತು ಸವೆತದಿಂದಾಗುವುದು ಇನ್ನೊಂದು ರೀತಿ. ಮೂರನೆಯ ರೀತಿಯಲ್ಲಿ ಸಾಗರ ತಳದಲ್ಲಾಗುವ ಶೀಲಾಸಂಚಯನದಿಂದ ಒಂದರ ಮೇಲೊಂದರಂತೆ ಜಲಶಿಲಾಪದರಗಳು ರೂಪುಗೊಳ್ಳುತ್ತವೆ. ಹಲವಾರು ದಶಲಕ್ಷ ವರ್ಷಗಳ ಕಾಲ ಈ ತೆರನಾಗಿ ಸಂಚಯನಗೊಂಡ ಹೇರಳ ಶಿಲಾ ಸಮೂಹದಿಂದ ಏರ್ಪಡುವ ಒತ್ತಡ, ಶಾಖ ಮುಂತಾದ ನೈಸರ್ಗಿಕ ಬಲಗಳಿಂದ ಈ ಶಿಲೆಗಳು ಮೇಲೆತ್ತಲ್ಲಟ್ಟು ಪರ್ವತಗಳಾಗುತ್ತವೆ.
ಇವಿಷ್ಟೂ ಅಲ್ಲದೆ ಖಂಡಗಳ ಅಲೆತ (ನೋಡಿ- ಖಂಡಗಳ-ಅಲೆತ) ವಾದದ ಪ್ರಕಾರ ವಿಶಾಲ ಭೂಖಂಡಗಳು ಸತತ ಚಲನೆಯಲ್ಲಿದ್ದು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಆ ಭಾಗದಲ್ಲಿ ಭೂಭಾಗ ಎತ್ತರವಾಗಿ ಮೇಲೆತ್ತಲ್ಪಡುವುದು. ಇತ್ತ ಕುಗ್ಗುತ್ತಿರುವ ಭೂಮಿಯ ಹೊರಪದರ ಸುಕ್ಕಾಗುವುದರಿಂದ ಪರ್ವತಗಳ ಏಣು ಏಣಾಗಿ ಮೈದಳೆಯುವುದು ಸಾಧ್ಯ. ಭೂಮಿಯಲ್ಲಿ ಶೇಖರವಾಗುತ್ತಿರುವ ವಿಕಿರಣಪಟು ಖನಿಜಗಳಿಂದ ಉಷ್ಣ ಹೆಚ್ಚಾದಂತೆ ಭೂಮಿಯ ಹೊಸಪದರ ಅಲ್ಲಲ್ಲಿ ಕ್ಷೀಣಿಸಿ ಏರು ತಗ್ಗುಗಳು ಉಂಟಾಗುತ್ತವೆ. ಸಾಗರ ತಳಗಳ ಮೇಲೆ ಹರಡುತ್ತಿರುವ ಹೇರಳ ಶಿಲಾನಿಕ್ಷೇಪಗಳಿಂದ ತಳಭಾಗದಲ್ಲಿ ಒತ್ತಡದಿಂದ ಹೆಚ್ಚುತ್ತಿರುವ ಶಾಖ ಶಿಲಾಪದರಗಳು (ರೊಟ್ಟಿ ಬೇಯುವಾಗ ಉಬ್ಬುವಂತೆ) ಉಬ್ಬುತ್ತವೆ. ಈ ರೀತಿಯ ಉಬ್ಬುವಿಕೆ ಪರ್ವತಗಳಾಗುತ್ತವೆ ಎಂಬ ವಾದ ಉಂಟು. ಭೂಮಿಯ ಹೊರಪದರದಲ್ಲಿಯ ಭೂಭಾಗಗಳು ಹೆಚ್ಚು ಕಡಿಮೆ ಸಮತೋಲದಲ್ಲಿದ್ದು ಆಗಾಗ್ಗೆ ಭೂಗರ್ಭದಲ್ಲಾಗುವ ಏರುಪೇರಿನಿಂದ ಇದರಲ್ಲಿ ವ್ಯತ್ಯಾಸ ತಲೆದೋರುವುದು. ಇದರಿಂದಾಗಿ ಕೆಲವು ಭೂಭಾಗಗಳು ಹೆಚ್ಚು ಎತ್ತರಕ್ಕೆ ಏರಿ ಪರ್ವತಗಳಾಗುತ್ತವೆ. ಅದರೆ ಈ ವಾದ ಪರ್ವತಗಳ ಜನನವನ್ನು ಪೂರ್ಣವಾಗಿ ವಿವರಿಸಲು ಸಾಲದು.
ಪರ್ವತಗಳ ಹಂಚಿಕೆ : ಪ್ರಪಂಚದ ಭೂಭಾಗದಲ್ಲಿ 20% ಭಾಗ ಪರ್ವತಗಳಿಂದ ಕೂಡಿವೆ. ಆಫ್ರಿಕ, ಆಸ್ಟ್ರೇಲಿಯ ಅಂಥ ಕೆಲವು ಭೂಖಂಡಗಳಲ್ಲಿ ಕೇವಲ ಕೆಲವೇ ಪರ್ವತಗಳಿವೆ. ಏಷ್ಯಖಂಡದಲ್ಲಿ ವಿಶಾಲಭಾಗ ಎತ್ತರವಾದ ಮತ್ತು ದುರ್ಗಮವಾದ ಪರ್ವತ ಪ್ರದೇಶಗಳಿಂದ ಕೂಡಿದೆ. ಪ್ರಪಂಚದ ಭೂಪಟವನ್ನು ನೋಡಿದರೆ ವಿಶಾಲ ಮತ್ತು ಪ್ರಮುಖ ಪರ್ವತಗಳು ಎರಡು ಮುಖ್ಯ ವಲಯಗಳಲ್ಲಿ ಹರಡಿವೆ ಎಂದು ತಿಳಿಯುತ್ತದೆ. ಒಂದು ವಲಯ ಪೆಸಿಫಿಕ್ ಮಹಾಸಾಗರದ ಅಂಚಿನ ಸುತ್ತಲೂ ಅಲ್ಲಲ್ಲಿ ತುಂಡಾದ ವೃತ್ತಾಕಾರದಲ್ಲಿ ಹಬ್ಬಿದೆ. ಅದೇ ರೀತಿ ಅವಿಚ್ಛಿನ್ನ ಪರ್ವತವಲಯ ಉತ್ತರ ಅಮೆರಿಕ, ದಕ್ಷಿಣ ಅಮೆರಿಕಗಳ ಪಶ್ಚಿಮ ಭಾಗದಲ್ಲಿ ರಾಕೀ ಮತ್ತು ಆಂಡೀಸ್ ಪರ್ವತಸ್ತೋಮಗಳು ಉತ್ತರ ದಕ್ಷಿಣಮುಖವಾಗಿ ಹಬ್ಬಿವೆ.  ಎರಡನೆಯ ಪರ್ವತವಲಯ ಉತ್ತರ ದಕ್ಷಿಣ ಯೂರೋಪ್, ಏಷ್ಯ ಮೈನರ್ ಮತ್ತು ಏಷ್ಯ ಮೂಲಕ ಹಾದು ಪೆಸಿಫಿಕ್ ವೃತ್ತವನ್ನು ಆಗ್ನೇಯ ಭಾಗದಲ್ಲಿ ವಿಭಜಿಸುತ್ತದೆ.
(ಎಂ.ಎನ್.ಎಂ.)

ಭೂಮಿಯ ಪ್ರಮುಖ ಪರ್ವತಶಿಖರಗಳು

ಎತ್ತರ, ಮೀಟರುಗಳಲ್ಲಿವೆ. ಅವರೋಹೀ ಉನ್ನತಿ ಪ್ರಕಾರ ಅಳವಡಿಸಿದೆ.
ಕ್ರ.ಸಂ. ಹೆಸರು             ಎತ್ತರ        ಶ್ರೇಣಿ ಮತ್ತು ಸ್ಥಳ             ವೈಶಿಷ್ಟ್ಯ           

1     2                 3              4                              5                  

1  ಎವರೆಸ್ಟ್            8848   ಹಿಮಾಲಯ, ನೇಪಾಲ-ಟಿಬೆಟ್ ಎಲ್ಲೆ        ಭೂಮಿಯ ಅತ್ಯುನ್ನತ ಶಿಖರ
2  ಗಾಡ್ವಿನ್ ಆಸ್ಟಿನ್       8611   ಕಾರಕೋರಮ್, ಭಾರತ
   ಅಥವಾ ಏ2 ಅಥವಾ
   ದಾಪ್‍ಸಾಂಗ್
3  ಕಾಂಚನಗಂಗಾ        8598   ಹಿಮಾಲಯ, ನೇಪಾಲ-ಸಿಕ್ಕಿಮ್ ಎಲ್ಲೆ               -
4  ಲ್ಹೋಟ್ಸೆ I                  8501    ಹಿಮಾಲಯ, ನೇಪಾಲ-ಟಿಬೆಟ್ ಎಲ್ಲೆ               -
5  ಮಕಲೂ            8481   ಹಿಮಾಲಯ, ನೇಪಾಲ-ಟಿಬೆಟ್ ಎಲ್ಲೆ         ಎವರೆಸ್ಟಿನ ಉಪಶಿಖರ
6  ಲ್ಹೋಟ್ಸೆ II                  8383    ಹಿಮಾಲಯ, ನೇಪಾಲ-ಟಿಬೆಟ್ ಎಲ್ಲೆ                        -
7  ಧವಲಗಿರಿ            8172   ಹಿಮಾಲಯ, ನೇಪಾಲ                        -
8  ಚೋ ಓಯೂ         8153   ಹಿಮಾಲಯ, ನೇಪಾಲ-ಟಿಬೆಟ್ ಎಲ್ಲೆ       ಎವರೆಸ್ಟಿನ ಉಪಶಿಖರ
9  ಮನಾಸ್ಲು             8125   ಹಿಮಾಲಯ, ನೇಪಾಲ                       -
10 ನಂಗ ಪರ್ವತ್        8123   ಹಿಮಾಲಯ, ನೇಪಾಲ                       -
11 ಅನ್ನಪೂರ್ಣ          8078   ಹಿಮಾಲಯ, ನೇಪಾಲ                       -    
12 ಕಮ್ಯೂನಿಸಮ್ ಶಿಖರ    7495   ಪಾಮಿರ್-ಆಲ್ಯೆ, ರಷ್ಯ                  ರಷ್ಯದ ಅತ್ಯುನ್ನತ ಶಿಖರ
13 ಆಕನ್‍ಕಾಗ್ವ            6959   ಆಂಡೀಸ್, ಆರ್ಜೆಂಟೀನ                ಪಶ್ಚಿಮಾರ್ಧಗೋಳದಲ್ಲಿ 
                                                                ಅತ್ಯುನ್ನತ ಶಿಖರವೆಂದು     
                                                                ಬಹಳ ಕಾಲ ಪರಿಗಣಿತವಾಗಿತ್ತು
14 ಚಿಂಬರಾಜೋó        6267   ಆಂಡೀಸ್ ಎಕ್ವಡಾರ್                       -
15 ಮಕಿನ್ಲೀ            6194   ಅಲಾಸ್ಕ ಶ್ರೇಣಿ, ಅಲಾಸ್ಕ                 ಉತ್ತರ ಅಮೆರಿಕದ ಅತ್ಯುನ್ನತ ಶಿಖರ 
16 ಲೋಗನ್           6050   ಸೇಂಟ್ ಈಲಿಯಾಸ್, ಕೆನಡ             ಕೆನಡದ ಅತ್ಯುನ್ನತ ಶಿಖರ 
17 ಕೋಟಪಾಕ್ಸೀ         5897   ಆಂಡೀಸ್, ಎಕ್ವಡಾರ್                  ಭೂಮಿಯ ಅತ್ಯುನ್ನತ ಜೀವಂತ ಜ್ವಾಲಾಮುಖಿ 
18 ಕಿಲಿಮಂಜಾರೋ      5895   ಒಂಟಿ ಶಿಖರ, ಟಾನ್‍ಜಾನಿಯ            ಆಫ್ರಿಕದ ಅತ್ಯುನ್ನತ ಶಿಖರ
19 ಕಯಾಂಬೀ          5790   ಆಂಡೀಸ್ ಎಕ್ವಡಾರ್               ಚೌಕಾಕಾರದ ಅಗ್ರದಿಂದ ಕೂಡಿರುವ, ನಂದಿ ಹೋದ 
                                                            ಜ್ವಾಲಾಮುಖಿ 
20 ಓರಿಜಾóಬ           5700   ಮೆಕ್ಸಿಕನ್ ಪ್ರಸ್ಥಭೂಮಿ, ಮೆಕ್ಸಿಕೋ       ಮೆಕ್ಸಿಕೋದ ಅತ್ಯುನ್ನತ ಶಿಖರ
21 ಎಲ್‍ಬ್ರಜ್          5633   ಕಾಕಸಸ್, ರಷ್ಯ                    ಕಾಕಸಸಿನ ಅತ್ಯುನ್ನತ ಶಿಖರ
22 ಸೇಂಟ್ ಇಲೈಯಸ್    5452  ಸೇಂಟ್ ಇಲೈಯಸ್, ಕೆನಡ-ಅಲಾಸ್ಕ           -
                             ಎಲ್ಲೆ 
23 ಪೊಪೊಕೆಟಪೆಟ್ಲ್ಸ್      5452  ಮೆಕ್ಸಿಕನ್ ಪ್ರಸ್ಥಭೂಮಿ, ಮೆಕ್ಸಿಕೋ       ಹೊಗೆಯಾಡುವ ಪರ್ವತದ 
                                                           ಆಜ್ಟೆಕ್ ಹೆಸರು ; ಈಗ 
                                                           ನಿಷ್ಕ್ರಿಯಾತ್ಮಕ
24 ಮೈಪೂ ಅಥವಾ      5323  ಆಂಡೀಸ್, ಚಿಲಿ-ಆರ್ಜೆಂಟೀನ         ಜೀವಂತ ಜ್ವಾಲಾಮುಖಿ 
    ಮೈಪೋ                  ಎಲ್ಲೆ                
25 ಈಸ್ಟಾಸೀವಾಟ್ಲ್       5286  ಸಿಯೆರ ಮೇದ್ರೆ, ಮೆಕ್ಸಿಕೋ            ಶ್ವೇತವನಿತೆ ಎಂಬುದಕ್ಕೆ 
                                                          ಆಜ್ಟೆಕ್ ಹೆಸರು
26 ಟಲೀಮ            5215 ಕಾರ್ಡಿಲೆರ ಆಕ್ಸಿಡೆಂಟಲ್,             ಜೀವಂತ ಜ್ವಾಲಾಮುಖಿ    
                            ಕೊಲಂಬಿಯ 
27 ಕೀನ್ಯ              5199 ಒಂಟಿ ಶಿಖರ, ಕೀನ್ಯ                     -
28 ಆರರಾತ್           5185 ಆರ್ಮೀನಿಯನ್ ಪ್ರಸ್ಥಭೂಮಿ         ಮಹಾ ಪ್ರಳಯಾನಂತರ 
                                          ತುರ್ಕಿ               (ಡೆಲ್ಯೂಚ್) 
                                                         ನೋವಾನ   
                                                         ಹಡಗು ಆರರಾತ್ ಮೇಲೆ  
                                                         ನೆಲೆ ಊರಿತೆಂದು ಐತಿಹ್ಯ
29 ವಿನ್‍ಸನ್ ಮ್ಯಾಸಿಫ್    5140 ಸೆಂಟಿನಿಯಲ್ ಪರ್ವತ, ಅಂಟಾ-
                                 ರ್ಕ್‍ಟಿಕ                   ಅಂಟಾರ್ಕ್‍ಟಿಕದ ಅತ್ಯುನ್ನತ 
                                                          ಶಿಖರ
30 ಮಾನ್ ಬ್ಲಾನ್       4807   ಪೆನೈನ್ ಆಲ್ಪ್ಸ್, ಫ್ರಾನ್ಸ್            ಆಲ್ಪ್ಸ್ ಪರ್ವತಗಳಲ್ಲಿ 
                                                         ಅತ್ಯುನ್ನತ ಶಿಖರ
31 ಮಾಂಟ್ ರೋಸó     4634   ಪೆನೈನ್ ಆಲ್ಪ್ಸ್, ಸ್ವಿಟ್‍ಜóರ್‍ಲೆಂಡ್-    ಇದರ ಇಳಿಜಾರುಗಳಲ್ಲಿರುವ 
                             ಇಟಲಿ ಎಲ್ಲೆ                    ಗಣಿಗಳಿಂದ ಕಬ್ಬಿಣ, ತಾಮ್ರ 
                                                         ಮತ್ತು ಚಿನ್ನವನ್ನು 
                                                         ಉತ್ಖನಿಸಲಾಗಿತ್ತು 
32 ಮ್ಯಾಟರ್ ಹಾರ್ನ್    4478   ಪೆನೈನ್ ಆಲ್ಪ್ಸ್, ಸ್ವಿಟ್‍ಜóರ್‍ಲೆಂಡ್-    ಕೆಚ್ಚೆದೆಯ ಪರ್ವತಾರೋಹಿಗಳಿಗೆ
                             ಎಲ್ಲೆ                         ಪ್ರಿಯವಾದ ಶಿಖರ
33 ಹ್ವಿಟ್‍ನೀ           4418   ಸಿಯೆರ ನೆವಾಡ, ಕ್ಯಾಲಿಫೋರ್ನಿಯ .  ಕ್ಯಾಲಿಫೋರ್ನಿಯ ಅತ್ಯುನ್ನತ 
                                                           ಶಿಖರ 
34 ಎಲ್ಬರ್ಟ್           4399   ಸವಾಚ್ ಕಾಲರ್ಯಾಡೋ            ರಾಕೀ ಪರ್ವತಗಳಲ್ಲಿ 
                                                         ಅತ್ಯುನ್ನತ ಶಿಖರ 
35 ರೇನಿಯರ್         4392   ಕ್ಯಾಸ್‍ಕೇಡ್, ವಾಷಿಂಗ್‍ಟನ್         ವಾಷಿಂಗ್‍ಟನ್ನಿನ ಅತ್ಯುನ್ನತ 
                                                           ಶಿಖರ 
36 ಲಾಂಗ್ಸ್ ಶಿಖರ       4345  ರಾಕೀ ಪರ್ವತ, ಕಾಲರ್ಯಾಡೋ       ರಾಕೀ ಪರ್ವತ ರಾಷ್ಟ್ರೀಯ 
                                                          ಉದ್ಯಾನದಲ್ಲಿದೆ.
37 ಷ್ಯಾಸ್ಟ             4317  ಕ್ಯಾಸ್‍ಕೇಡ್, ಕ್ಯಾಲಿಫೋರ್ನಿಯ       ಅವಳಿ ಶಿಖರಗಳಿಂದಾಗಿ 
                                                           ಪ್ರಖ್ಯಾತ
38 ಪೈಕ್ಸ್ ಶಿಖರ        4301  ರ್ಯಾಮ್‍ಪಾರ್ಟ್, ಕಾಲರ್ಯಾಡೋ       ರಾಕೀ ಶ್ರೇಣಿಯಲ್ಲಿ ಅತ್ಯಂತ 
                                                           ಪ್ರಸಿದ್ಧ ಶಿಖರ
39 ಮೌನಕೀಯ        4205  ಜ್ವಾಲಾಮುಖಿ ದ್ವೀಪ, ಹವಾಯಿ       ಭೂಮಿಯ ಅತ್ಯುನ್ನತ 
                                                            ದ್ವೀಪಶಿಖರ 
40 ಮೌನ ಲೋಯ     4169  ಜ್ವಾಲಾಮುಖಿ ದ್ವೀಪ, ಹವಾಯಿ       ಅತ್ಯಂತ ಪ್ರಸಿದ್ಧ 
                                                        ಜ್ವಾಲಾಮುಖಿ ಪರ್ವತಗಳ ಪೈಕಿ 
                                                        ಒಂದು
41 ಯುಂಗ್‍ಫ್ರಾವ್      4158  ಆಲ್ಪ್ಸ್, ಸ್ವಿಟ್‍ಜóರ್‍ಲೆಂಡ್          ಪರ್ವತದ ಮೇಲೆ ಸ್ಪಲ್ಪದೂರ  
                                                       ವಿದ್ಯುತ್ ರೈಲುಮಾರ್ಗ ಸೌಲಭ್ಯ 
                                                           ಉಂಟು
42 ಫ್ಯೂಜೀ            3776  ಜ್ವಾಲಾಮುಖಿ ದ್ವೀಪ, ಜಪಾನ್      ಜಪಾನೀಯರಿಗೆ ಪವಿತ್ರವಾದ 
                                                          ಪರ್ವತ
43 ಕುಕ್              3764  ದಕ್ಷಿಣ ಆಲ್ಪ್ಸ್ ನ್ಯೂಜೀóಲೆಂಡ್      ನ್ಯೂಜೀಲೆಂಡಿನ ಅತ್ಯುನ್ನತ 
                                                            ಶಿಖರ
44 ಎರೆಬಸ್           3743  ರಾಸ್‍ಬ್ಯಾರಿತರ್, ರಾಸ್‍ದ್ವೀಪ    ಅಂಟಾರ್ಕ್‍ಟಿಕದ ಜೀವಂತ 
                                                          ಜ್ವಾಲಾಮುಖಿ
45 ಹುಡ್             3427  ಕ್ಯಾಸ್‍ಕೇಡ್, ಆರೆಗಾನ್          ಸ್ತಬ್ಧ ಜ್ವಾಲಾಮುಖಿ
46 ಲಾಸೆನ್ ಶಿಖರ       3187  ಕ್ಯಾಸ್‍ಕೇಡ್, ಕ್ಯಾಲಿಫೋರ್ನಿಯ    ಅಲಾಸ್ಕ ಮತ್ತು 
                                                      ಹವಾಯಿಯನ್ನು ಉಳಿದು 
                                                      ಅಮೆರಿಕ ಸಂಯುಕ್ತ ಸಂಸ್ಥಾನಗಳ  
                                                      ಏಕೈಕ ಜೀವಂತ ಜ್ವಾಲಾಮುಖಿ
47 ಕಾಸೀóಯಸ್ಕೋ       2228  ಆಸ್ಟ್ರೇಲಿಯನ್ ಆಲ್ಪ್ಸ್, ನ್ಯೂ       ಆಸ್ಟ್ರೇಲಿಯದ ಅತ್ಯುನ್ನತ ಶಿಖರ
                            ಸೌತ್‍ವೇಲ್ಸ್   
48 ಮಿಚೆಲ್           2037   ಅಪಲೇಚಿಯನ್, ಉತ್ತರ         ಅಪಲೇಚಿಯನ್ ಪರ್ವತಗಳಲ್ಲಿ    
                            ಕ್ಯಾರೊಲೀನ                  ಅತ್ಯುನ್ನತ ಶಿಖರ
49 ವಿಸೂವಿಯಸ್       1277  ಇಟಲಿ                      ಯೂರೋಪಿನ ಮುಖ್ಯ 
                                                      ಭೂಪ್ರದೇಶದ ಏಕೈಕ ಜೀವಂತ 
                                                          ಜ್ವಾಲಾಮುಖಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ